ಅರಕಲಗೂಡು
	ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಗೆ ಸೇರಿದ ತಾಲ್ಲೂಕು. ಸುತ್ತಲೂ ಹಾಸನ, ಆಲೂರು, ಪಿರಿಯಾಪಟ್ಟಣ, ಹೊಳೆನರಸೀಪುರ ಮತ್ತು ಕೊಡಗು ತಾಲ್ಲೂಕುಗಳಿವೆ. ಉತ್ತರಕ್ಕೆ ಹೇಮಾವತಿ, ದಕ್ಷಿಣಕ್ಕೆ ಕಾವೇರಿ ನದಿಗಳು ಹರಿಯುತ್ತವೆ. ಪಶ್ಚಿಮದಲ್ಲಿ ಕಾಡುಗಳಿಂದ ಕೂಡಿದ ಅನೇಕ ಬೆಟ್ಟಗಳಿವೆ. ಅಲ್ಲಲ್ಲಿ ವಿಶಾಲವಾದ ಕುರುಚಲು, ಹುಲ್ಲು ಮತ್ತು ಮರಗಳುಳ್ಳ ಕಾವಲುಗಳಿವೆ. ವರ್ಷಕ್ಕೆ 28" ಗಳ ವರೆಗೆ ಮಳೆಯಾಗುತ್ತದೆ. ಜೋಳ, ರಾಗಿ, ದ್ವಿದಳ ಧಾನ್ಯಗಳು, ಈರುಳ್ಳಿ, ಕಡಲೇಕಾಯಿ, ಹೊಗೆಸೊಪ್ಪು, ಮೆಣಸಿನಕಾಯಿ-ಇವುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. 18 ದೊಡ್ಡ ಕೆರೆಗಳೂ, 850 ಚಿಕ್ಕಕೆರೆಗಳೂ ಇವೆ. ಕಾವೇರಿನದಿಗೆ ಕೃಷ್ಣರಾಜಕಟ್ಟೆ ಎಂಬ ಚಿಕ್ಕ ಅಣೆಕಟ್ಟನ್ನು ಕಟ್ಟಲಾಗಿದೆ. ಇದರಿಂದ ರಾಮನಾಥಪುರ ಮತ್ತು ಕಟ್ಟೆಪುರ ಎಂಬ ಕಾಲುವೆಗಳನ್ನು ನಿರ್ಮಿಸಿಕೊಂಡು ಸುಮಾರು 15,000 ಎಕರೆಗಳಿಗೆ ನೀರನ್ನು ಒದಗಿಸಲಾಗಿದೆ. ದೊಡ್ಡಕೆರೆಗಳಿಂದ ಮತ್ತು ಕಾಲುವೆಗಳಿಂದ ಬತ್ತ, ತೋಟದ ಬೆಳೆಗಳು, ಅಡಿಕೆ, ಕಬ್ಬು, ತೆಂಗು ಮುಂತಾದವನ್ನು ಬೆಳೆಯುತ್ತಾರೆ. ಪಶ್ಚಿಮದ ಬೆಟ್ಟಗಳ ಮೇಲೆ ಅಲ್ಲಲ್ಲಿ ಚಿಕ್ಕ ಕಾಫಿ ತೋಟಗಳೂ ಇವೆ. ದನಕರುಗಳು ಹೆಚ್ಚಾಗಿವೆ. ಜನ ಸಾಂದ್ರತೆ 290 ರಷ್ಟಿದೆ. ಈ ತಾಲ್ಲೂಕಿನ ಜನಸಂಖ್ಯೆ 1,99,243 2001. ಪಟ್ಟಣದ ಜನಸಂಖ್ಯೆ 15,184 2001.

	ಅರಕಲಗೂಡು ಈ ತಾಲ್ಲೂಕಿನ ದೊಡ್ಡ ಊರು. ಬತ್ತ, ಅಡಿಕೆ, ತೆಂಗು, ಹೊಗೆಸೊಪ್ಪು ಇತ್ಯಾದಿಗಳ ವ್ಯಾಪಾರಕೇಂದ್ರ. ದನಗಳ ಜಾತ್ರೆಯಾಗುವ ಸ್ಥಳ.									
(ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ